ಕರಕೊ : ಜಪಾನಿನ ನಾರಾ ಪ್ರಾಂತ್ಯದಲ್ಲಿ ಷಿಕಿಜಿಲ್ಲೆಯ ಕವಹಿಗಷಿ ಎಂಬ ಗ್ರಾಮದ ಸಾಮೀಪ್ಯದಲ್ಲಿರುವ ಕರಕೊ ನೆಲೆಯಲ್ಲಿ 1936ರಲ್ಲಿ ನಡೆದ ಉತ್ಖನನಗಳಿಂದ ಯ ಯೋಇ ಸಂಸ್ಕೃತಿಯ ಆದಿಭಾಗಕ್ಕೆ ಸೇರಿದ ಮಾಹಿತಿಗಳು ದೊರಕಿವೆ. ಯಮಟೋ ಮೈದಾನದ 
ಕೆಳಪ್ರದೇಶದಲ್ಲಿ ಪ್ರಾಚೀನ ಹುಟ್ಸುಸೆ ನದಿಯ ಬಯಲಿನಲ್ಲಿರುವ ಈ ನೆಲೆಯ ಒದ್ದೆಮಣ್ಣಿನಲ್ಲಿ ಬತ್ತದ ವ್ಯವಸಾಯಕ್ಕೆ ಉಪಯೋಗಿಸುತ್ತಿದ್ದ ಮರದ ಉಪಕರಣಗಳೂ ಧಾನ್ಯಶೇಖರಣೆಗೆ ಉಪಯೋಗಿಸುತ್ತಿದ್ದ ಪಾತ್ರೆಗಳೂ ಬುಟ್ಟಿಗಳೂ ಮೃತ್ಪಾತ್ರೆಗಳನ್ನು ತೂಗುಹಾಕಲು 
ಬಳಸುತ್ತಿದ್ದ ನೆಲುಗಳೂ ಹೆಚ್ಚು ಸಂಖ್ಯೆಯಲ್ಲಿ ದೊರಕಿವೆ. ಈ ಜನರು ನೀರಿಗಾಗಿ ಆಳವಾದ ಬಾವಿಗಳನ್ನು ಅಗೆದಿರುತ್ತಿದ್ದು ಅಂಥ ಕೆಲ ಬಾವಿಗಳಲ್ಲಿ ಮರದ ದಿಮ್ಮಿಗಳನ್ನು ಕೊರೆದು ಮಾಡಿದ ಪೀಪಾಯಿಗಳನ್ನು ಪಾಶರ್ವ್‌ಗಳು ಕುಸಿಯದಂತೆ ರಕ್ಷಿಸಲು ಉಪಯೋಗಿಸಿದ್ದರು. 
ನವಶಿಲಾಯುಗದ ಅನಂತರ ಬಳಕೆಗೆ ಬಂದ ಕಂಚಿನಯುಗಕ್ಕೆ ಸೇರುವ ಈ ಯ ಯೋಇ ಸಂಸ್ಕೃತಿಯಲ್ಲಿ ಪ್ರಪ್ರಥಮವಾಗಿ ಬತ್ತದ ವ್ಯವಸಾಯ ರೂಢಿಗೆ ಬಂದಿತು. ಮರದ ಉಪಕರಣಗಳನ್ನೂ ಮೃತ್ಪಾತ್ರೆಗಳನ್ನೂ ವಿಶೇಷವಾಗಿ ಉಪಯೋಗಿಸುತ್ತಿದ್ದರು. ನೀರಾವರಿ ಪದ್ಧತಿ 
ಬಳಕೆಯಲ್ಲಿದ್ದಿತು. ತಮ್ಮ ವಸತಿಗಳನ್ನು ಮರದ ಕಂಬ ಮತ್ತು ಗೋಡೆ ಮತ್ತು ಛಾವಣಿಗಳಿಂದ ನಿರ್ಮಿಸುತ್ತಿದ್ದರು. ವೃತ್ತ ಅಥವಾ ಆಯಾಕಾರದ ಈ ಗೃಹಗಳು 24’x21’ ಪ್ರಮಾಣದಲ್ಲಿರುತ್ತಿದ್ದವು. ಕಲ್ಲಿನ ಆಯುಧಗಳು ಕೆಲವು ನಯಗೊಳಿಸಿದವುಗಳಾಗಿದ್ದರೆ ಮತ್ತೆ ಕೆಲವು 
ಸೂಕ್ಷ್ಮಶಿಲಾಯುಗ ರೀತಿಯವು ಗಳಾಗಿದ್ದವು. ಮೂಳೆಯ ಆಯುಧಗಳು ಬಳಕೆಯಲ್ಲಿದ್ದವು. ನೆಯ್ದ ಉಡುಪುಗಳನ್ನು ಉಪಯೋಗಿಸುತ್ತಿದ್ದರು. ಮೃತದೇಹಗಳನ್ನು ತೊಟ್ಟಿಗಳಲ್ಲೊ ಜಾಡಿಗಳಲ್ಲೊ ಹೂಳಿಡುತ್ತಿದ್ದರು. ಚೀನದ ಪ್ರಭಾವದಿಂದ ಕಂಚಿನ ಬಳಕೆ ಪ್ರಾರಂಭವಾಗಿ ಅನೇಕ 
ವಿಧವಾದ ಆಯುಧಗಳು-ಮುಖ್ಯವಾಗಿ ಕತ್ತಿಗಳು ಮತ್ತು ಚಾಕುಗಳು ಬಳಕೆಗೆ ಬಂದವು.	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ